ಆನ್‌ಲೈನ್ ವಂಚನೆ: 8 ಕೋಟಿ ಕಳೆದುಕೊಂಡಿದ್ದ ಮಾಜಿ ಐಜಿ ಗುಂಡು ಹಾರಿಸಿಕೊಂಡು ಆತ್ಮ*ಹತ್ಯೆ ಯತ್ನ

8 ಕೋಟಿಗೂ ಅಧಿಕ ಮೌಲ್ಯದ ಆನ್‌ಲೈನ್ ವಂಚನೆ ಬಗ್ಗೆ ಡೆತ್‌ನೋಟ್ ಬರೆದಿಟ್ಟು ಪಂಜಾಬ್‌ನ ಮಾಜಿ ಪೊಲೀಸ್ ಇನ್ಸ್‌ಪೆಕ್ಟ‌ರ್ ಜನರಲ್ ಅಮರ್ ಸಿಂಗ್ ಚಹಾಲ್ ಅವರು ತಮ್ಮ ಭದ್ರತಾ ಸಿಬ್ಬಂದಿಯ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ.

ಪಂಜಾಬ್‌ನ ಪಟಿಯಾಲಾದಲ್ಲಿ ಈ ಘಟನೆ ನಡೆದಿದ್ದು, ಅವರಿಗೆ ಘಟನೆಯಲ್ಲಿ ತೀವ್ರ ಗಾಯಗಳಾಗಿವೆ. ಕೂಡಲೇ ಅವರನ್ನು ನಗರದ ಪಾರ್ಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ತಮ್ಮದೇ ಭದ್ರತಾ ಸಿಬ್ಬಂದಿಯ ಗನ್‌ನಿಂದ ಗುಂಡು ಹಾರಿಸಿಕೊಳ್ಳುವ ಮೊದಲು ಅಮರ್ ಸಿಂಗ್ ಚಹಾಲ್ ಅವರು, 12 ಪುಟಗಳ ಡೆತ್‌ ನೋಟ್ ಬರೆದಿದ್ದಾರೆ. ಪಂಜಾಬ್ ಪೊಲೀಸ್‌ ಡಿಜಿಪಿ ಗೌರವ್ ಯಾದವ್ ಅವರನ್ನು ಉದ್ದೇಶಿಸಿ ಈ ಪತ್ರ ಬರೆದಿದ್ದು, ಆ ಪತ್ರದಲ್ಲಿ 8.10 ಕೋಟಿ ರೂ.ಗಳ ಆನ್‌ಲೈನ್ ವಂಚನೆ ಪ್ರಕರಣದ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಚಾಹಲ್ ಅವರು ಪಂಜಾಬ್ ಐಜಿ ಹುದ್ದೆಯಿಂದ ನಿವೃತ್ತರಾದಾಗಿನಿಂದ ಪಟಿಯಾಲದಲ್ಲಿ ವಾಸಿಸುತ್ತಿದ್ದರು.

ಗುಂಡಿನ ದಾಳಿಯ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸ್ ತಂಡಗಳು ಚಾಹಲ್ ಅವರ ನಿವಾಸಕ್ಕೆ ನೆರವು ನೀಡಲು ಧಾವಿಸಿದವು ಎಂದು ಪಟಿಯಾಲ ಎಸ್‌ಎಸ್‌ಪಿ ವರುಣ್ ಶರ್ಮಾ ಹೇಳಿದ್ದಾರೆ.

More From Author

ಅದ್ದೂರಿಯಾಗಿ ನಡೆದ ಶಿವಮೊಗ್ಗ ದಸರ